ಕೊಲೆಯಾದ ಫಾಝಿಲ್ ಮನೆಗೆ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ, ಸಾಂತ್ವನ

ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಫಾಝಿಲ್ ಅವರ ಸೋದರಮಾವ ರಹ್ಮಾನ್ ಅವರು, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

News Desk
News Desk

ಸುರತ್ಕಲ್, ಜು.31: ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್‌ರ ನಿವಾಸಕ್ಕೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರವಿವಾರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಫಾಝಿಲ್ ಅವರ ಸೋದರಮಾವ ರಹ್ಮಾನ್ ಅವರು, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸಂತಾಪ ಸೂಚಿಸಿ ಹೇಳಿಕೆಗಳನ್ನು ನೀಡುವ ಅವರು ಅಲ್ಪಸಂಖ್ಯಾತರಿಗೆ ತೊಂದರೆ, ನಷ್ಟಗಳಾದಾಗ ಯಾಕೆ ಉನ್ನತ ಹುದ್ದೆಯಲ್ಲಿರುವ ಡಿಕೆಶಿ ಸ್ಪಂದಿಸುವುದಿಲ್ಲ. ಹೀಗಿರುವಾಗ ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಕುರಿತು ಅವರಿಗೆ ಇರುವ ನಿಲುವು ಸ್ಪಷ್ಟಪಡಿಸಬೇಕು ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಫಾಝಿಲ್ ಕುಟುಂಬಸ್ಥರು, ಫಾಝಿಲ್‌ರ ಹತ್ಯೆ ರಾತ್ರಿ ಎಂಟು ಗಂಟೆ ವೇಳೆಗೆ ನಡೆದಿದ್ದು, ಆ ಸಮಯದಲ್ಲಿ ಮುಖ್ಯಮಂತ್ರಿ ಮಂಗಳೂರಿನಲ್ಲಿ ಇದ್ದರು. ಆದರೂ ಅವರು ಘಟನೆಯ ಕುರಿತು ಹೇಳಿಕೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಪರಿಹಾರ ನೀಡಿರುವ ಮುಖ್ಯಮಂತ್ರಿ, ಅಲ್ಲೇ ಎರಡು ಕಿ.ಮೀ. ದೂರದಲ್ಲಿದ್ದ ಕೊಲೆಯಾದ ಮಸೂದ್ ನಿವಾಸಕ್ಕೆ ತೆರಳಿಲ್ಲ. ಅದೇ ದಿನ ಫಾಝಿಲ್ ಹತ್ಯೆಯ ಸಮಯದಲ್ಲಿ ಮಂಗಳೂರಿನಲ್ಲಿದ್ದರೂ ಪ್ರತಿಕ್ರಿಯೆ ನೀಡಿಲ್ಲ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಬಿಜೆಪಿಯವರಿಗೆ ಮಾತ್ರ ಮುಖ್ಯಮಂತ್ರಿಯೋ ಎಂದು ಕುಟುಂಬಿಕರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿ ಅವರು ಮೃತರ ಕುಟುಂಬಗಳ ಜೊತೆ ನಡೆದುಕೊಂಡಿರುವ ರೀತಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಅವರು ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅದನ್ನೇ ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯ ನಡವಳಿಕೆಯನ್ನು ಟೀಕಿಸಿದರು.

ಸರಕಾರಕ್ಕೆ ಎಲ್ಲಾ ಜಾತಿ ಧರ್ಮ ಭಾಷೆಯ ಜನರೂ ಸಮಾನ ರೀತಿಯಲ್ಲಿ ತೆರಿಗೆಯನ್ನು ಕಟ್ಟುತ್ತಾರೆ ಆದರೆ ಇಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಸರಕಾರದ ಖಜಾನೆಯಿಂದ ಪರಿಹಾರ ನೀಡುವಾಗ ಎಲ್ಲರಿಗೂ ಸಮಾನವಾಗಿ ಆಗಬೇಕಿದೆ ಎಂದರು.

ಈ ಸಂದರ್ಭ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕ ಮೊಯ್ದಿನ್ ಬಾವ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಶಿಧರ ಹೆಗಡೆ, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಮಸೀದಿ ಅಧ್ಯಕ್ಷ ಸಮೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

- Advertisement -
TAGGED: ,
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!